ಕಾಂಡನ್, ಇ ಯು

 ಅಮೆರಿಕನ್ ಭೌತವಿಜ್ಞಾನಿ. ಶಕಲ ಸಿದ್ಧಾಂತ (ಕ್ವಾಂಟಮ್ ಥಿಯೊರಿ), ಅಣು ಮತ್ತು ಪರಮಾಣು ರೋಹಿತಶಾಸ್ತ್ರ, ನ್ಯೂಕ್ಲಿಯಸ್ಸಿಗೆ ಸಂಬಂಧಿಸಿದ ಭೌತವಿಜ್ಞಾನ ಈ ಕ್ಷೇತ್ರಗಳಲ್ಲಿಯೇ ಅಲ್ಲದೆ ಅತಿ ಸೂಕ್ಷ್ಮ ರೇಡಿಯೊ ಅಲೆಗಳಿಗೆ ಸಂಬಂಧಿಸಿದಂತೆಯೂ ಅನೇಕ ವ್ಯಾಪಕ ಸಂಶೋಧನೆಗಳ ಖ್ಯಾತಿ ಈತನದು. ಅಣುರೋಹಿತಕ್ಕೆ ಸಂಬಂಧಿಸಿದಂತೆ ಕಾಂಡನ್ ಮತ್ತು ಇನ್ನೊಬ್ಬ ವಿಜ್ಞಾನಿ ಫ್ರಾಂಕ್ ಇಬ್ಬರೂ ಸೇರಿ ಒಂದು ಮುಖ್ಯ ತತ್ತ್ವವನ್ನು ಪ್ರತಿಪಾದಿಸಿದ್ದಾರೆ. ಅಣುವಿನಲ್ಲಿರುವ ಎಲೆಕ್ಟ್ರಾನ್ ಒಂದು ಶಕ್ತಿ ಮಟ್ಟದಿಂದ ಇನ್ನೊಂದು ಶಕ್ತಿಮಟ್ಟಕ್ಕೆ ಸ್ಥಿತ್ಯಂತರಗೊಳ್ಳಲು ಬೇಕಾಗುವ ಕಾಲಾವಧಿ ನ್ಯೂಕ್ಲಿಯಸ್ಸಿನ ಕಂಪನ ಚಲನೆಗೆ ಹೋಲಿಸಿದಾಗ ಅತ್ಯಧಿಕ ಪ್ರಮಾಣವುಳ್ಳದ್ದಾಗಿರುವ ಕಾರಣ ಈ ಅವಧಿಯಲ್ಲಿ ನ್ಯೂಕ್ಲಿಯಸ್ ನಿಶ್ಚಲವಾಗಿರುವುದೆಂದು ಭಾವಿಸಬಹುದು ಎಂಬುದೇ ಫ್ರಾಂಕ್-ಕಾಂಡನ್ ತತ್ತ್ವದ ಮುಖ್ಯ ಅಂಶ. ಈ ತತ್ತ್ವ ಪ್ರತಿಪಾದಿತವಾದ ಕೆಲವು ವರ್ಷಗಳಲ್ಲೇ ಇದನ್ನು ಶಕಲಸಿದ್ಧಾಂತದಿಂದ ಪಡೆಯಬಹುದೆಂದು ಗೊತ್ತಾಯಿತು. ಘನ ಪದಾರ್ಥಗಳಿಗೆ ಸಂಬಂಧಿಸಿದ ಭೌತವಿಜ್ಞಾನ ಭಾಗದಲ್ಲಿ ಈ ತತ್ತ್ವದ ಅನೇಕ ಅನ್ವಯಗಳು ಕಂಡುಬಂದಿವೆ.

 ಪ್ರಿನ್ಸ್‍ಟನ್, ಮಿನ್ನಿಸೋಟ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದೇ ಅಲ್ಲದೆ, ಕಾಂಡನ್ 1945ರಿಂದ 1951ರವರೆಗೆ ಅಮೆರಿಕದ ಬ್ಯೂರೋ ಆಫ್ ಸ್ಟಾಂಡಡ್ರ್ಸ್ ಸಂಸ್ಥೆಯ ಮುಖ್ಯಾಧಿಕಾರಿಯಾಗಿಯೂ ಆಗಿದ್ದ. 1958ರಲ್ಲಿ ಹೂ ಓದಿಷಾ ಮತ್ತು ಕಾಂಡನ್ ಭೌತವಿಜ್ಞಾನಕ್ಕೆ ಸಂಬಂಧಿಸಿದಂತೆ ಹ್ಯಾಂಡ್ ಬುಕ್ ಆಫ್ ಫಿಸಿóಕ್ಸ್ ಎಂಬ ಅತ್ಯುಪಯುಕ್ತ ಭೌತವಿಜ್ಞಾನದ ಕೈಪಿಡಿಯೊಂದನ್ನು ಪ್ರಕಟಿಸಿದರು.

                                          

   (ಕೆ.ಎಸ್.ಆರ್.ಐ.)

(ಪರಿಷ್ಕರಣೆ: ಹೆಚ್.ಆರ್.ಆರ್)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 